Select Page

ವಿಸ್ತರಣಾ ನಿರ್ದೇಶಕರು

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೃಷಿ ವಿಸ್ತರಣಾ ನಿರ್ದೇಶನಾಲಯವು ಕೃಷಿ ಮತ್ತು ಕೃಷಿ ಸಂಬಂಧಿತ ತಂತ್ರಜ್ಞಾನಗಳ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ವಿಸ್ತರಣಾ ಸೇವೆಯು ಒಂದು ಸೇತುವೆಯಾಗಿದ್ದು, ಸಂಶೋಧನಾ ಕೇಂದ್ರಗಳಲ್ಲಿ ಅಭಿವೃದ್ಧಿ ಪಡಿಸಿದ ಕೃಷಿ ಮತ್ತು ಕೃಷಿ ಸಂಬಂಧಿತ ತಂತ್ರಜ್ಞಾನಗಳನ್ನು ರೈತರಲ್ಲಿಗೆ ಕೊಂಡೊಯ್ಯುತ್ತದೆ. ಇದರಿಂದಾಗಿ ರೈತರು ಮತ್ತು ಸಂಶೋಧನಾ ಕೇಂದ್ರಗಳ ನಡುವಿನ ತಾಂತ್ರಿಕ ಅಂತರವನ್ನು ನಿವಾರಿಸಲು ಅನುಕೂಲವಾಗುತ್ತದೆ. ವಿಸ್ತರಣಾ ಕಾರ್ಯದ ಪ್ರಮುಖ ಗುರಿಯೆಂದರೆ, ಪ್ರತಿಯೊಬ್ಬ ರೈತನು ತನ್ನ ಜಮೀನಿನಲ್ಲಿ ಪ್ರಮುಖ ಕೃಷಿ ಚಟುವಟಿಕೆಗಳನ್ನು ಮತ್ತು ಸಮಗ್ರ ಕೃಷಿ ಪದ್ಧತಿಯನ್ನು ವೈಜ್ಞಾನಿಕವಾಗಿ ಅಳವಡಿಸಿಕೊಂಡು ತನ್ನ ಸುಸ್ಥಿರ ಹಾಗೂ ನಿರಂತರ ಆದಾಯವನ್ನು ಹೆಚ್ಚಿಸುವುದಾಗಿದೆ. ವಿಸ್ತರಣಾ ನಿರ್ದೇಶನಾಲಯವು ತನ್ನ ತಳಮಟ್ಟದಲ್ಲಿ ರೈತರಿಗೆ ಮುಟ್ಟಿಸುವ ಸಲುವಾಗಿ ಏಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಆರು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, ಇವುಗಳಿಂದಾಗಿ ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ರೈತರಿಗೆ ಎದುರಾಗುವ ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದೆ.